Tuesday, December 14, 2010

Jyothi Mahadev - 4 poems

ಉತ್ಸವ
ವ್ಯಕ್ತಿರೂಪ ಹಂಗಿಲ್ಲದ
ಶಕ್ತಿರೂಪ ಚೇತನ-
ನಿನಗೇಕೆ ಹೆಸರು
ಕಲ್ಲಿನ ಕುಸುರು
ವೈಭವದ ಕೆಸರು!

ಯಾಕೆ ಬೇಕು ನಿನಗೆ-
ಪತಾಕೆಗಳ ಹಾವಳಿ
ಗೋಪುರದ ಬಾವಲಿ
ಗುಣುಗುಡುವ ಗಂಟೆ
ಅಂಟುಸ್ನಾನದ ತಂಟೆ!

ನಿನ್ನ ಸಾವಿರದ ಸಾವಿರ
ಹೆಸರುಗಳಲ್ಲಿ ನನಗೂ ಒಂದು-
ನಿನ್ನ ತೃಣ ನಾನೆಂಬ ನೆಪಕಾಗಿ
ನಿನ್ನ ಋಣ ನನಗೆಂಬ ನೆನಪಿಗಾಗಿ
ನಿನ್ನ ಘನತೆಯ ಸಣ್ಣ ಕುರುಹಾಗಿ!

*ಸುಪ್ತದೀಪ್ತಿ
೧೨-ಆಗಸ್ಟ್-೨೦೦೮
************

ಮಳೆಯಲ್ಲಿ ನೆನೆಯುತ್ತಾ...

ನಿನ್ನೆ ಕಟ್ಟಿದ ಮೋಡ ಇಂದು ಹನಿಹನಿದಾಗ
ತಂಪು ಅಂಗಳದೊಳಗೆ ಮನ ಹಚ್ಚಗೆ
ಇಂದಿನ ನೆನಪುಗಳು ನಾಳೆಯನು ತೆರೆವಾಗ
ಬಣ್ಣ ಬಾನಿನ ಅಂಚು, ದಿನ ಬೆಚ್ಚಗೆ

ಹೊಳೆದು ಕರಗಿದ ಹಗಲು ಮತ್ತೆ ಮರಳುವ ಹೊತ್ತು
ಸೆರಗಿನಂಚಲಿ ಗಂಟು ನಿನ್ನ ನೆನಪು
ಬರುವೆಯೋ ಬಾರೆಯೋ, ಕಾತರದ ಕೈಲಿತ್ತು
ಒಂದೊಂದು ಹನಿಯಿಳಿದ ಕೆಂಪು ಕದಪು

ಮಾಡಿನಂಚಿನ ಕೊನೆಗೆ ಸೆರೆಯಾದ ಸೋನೆಯಲಿ
ಹರಿಹರಿದು ಸುರಿವಂಥ ಒಲವ ಧಾರೆ
ಅದರ ನಲಿವಿನ ತಾಳ ನನ್ನೆದೆಯ ಮಿಡಿತದಲಿ
ಇಳಿದುಹೋಗಿದೆ ಕಾಲ ಕಡಲ ಸೇರೆ

ಮತ್ತೆ ಕಟ್ಟಿದೆ ಮೋಡ, ಹೊಳಪು ಸುರಿಯುವ ಕೆನ್ನೆ
ಸೆರಗಿನಂಚಿನ ಗಂಟು ನನ್ನದಲ್ಲ
ಬಯಲು ಆಲಯ ಮೀರಿ ಎದುರು ನಿಂತವನನ್ನೆ
ಕಣ್ಣತುಂಬಿಕೊ ಎನಲು ಶರಧಿಯೆಲ್ಲ
*ಸುಪ್ತದೀಪ್ತಿ
೧೨-ಫೆಬ್ರವರಿ-೨೦೦೯
************


ವಿಲಾಪ

ರಾಧೆ ರಾಧೇ ಎನದೆ ಅರೆಘಳಿಗೆಯೂ ಇರದೆ
ರಮಿಸಿ ಕಾಡಿದ ನನಗೆ ಏನಾಯಿತೋ
ರಾಧೆಯಾ ನೆರಳಿರದೆ ಗೆಜ್ಜೆಯಾ ದನಿಯಿರದೆ
ರಂಗಿನಾಟದ ಹುರುಪು ಹಾಳಾಯಿತೋ

ಕಿರಿಯನೆಂದೆಲ್ಲರೂ ಹಿರಿತನವನಾಡುತ್ತ
ಕೀಟಲೆಯನಾಡ್ಯಾಡಿ ಕೆಣಕುತಿರಲು
ಕಿನ್ನರಿಯ ಲೀಲೆಯಲಿ ಪ್ರೀತಿಯಲಿ ಕಾಯುತ್ತ
ಕಿಂಕಿಣಿಯನಾಡಿ ನೀ ಮನವ ಗೆಲಲು

ಹಾಲುಮೊಸರನು ಮೆಚ್ಚಿ ಬೆಣ್ಣೆಬೆಟ್ಟವನೆತ್ತಿ
ಹಸುಮಂದೆಯಲಿ ಕರುಗಳೊಡನಾಡುತ
ಹಾಲಾಹಲವ ಸುರಿವ ಹಾವ ಹೆಡೆಯನು ಮೆಟ್ಟಿ
ಹಾಡಿ ಆಡಿದ ನನ್ನ ಜೀವ ಗೆಣತಿ

ಮಾವ ಕರೆದನು ಎಂದು ಮನೆಯ ತೊರೆದೆನು ಅಂದು
ಮರೆಯುವೆನು ಹೇಗೆ ನಾ ಮನದಂಗಳ
ಮಾಳಿಗೆಯಲೇ ನಿಂದು ಪರದೆ ಹಿಂದೆಯೆ ನೊಂದು
ಮಾತು ಮರೆಸಿದೆ, ತುಳುಕಿಸದೆ ಕಂಗೊಳ

ಒಮ್ಮೆಯಾದರು ಬಂದು ನಿನ್ನ ಕಾಂಬೆನು ಎಂದು
ಒಂದಾಸೆ ಹೊತ್ತಿದ್ದೆ ಅರಮನೆಯಲಿ
ಒರಗುದಿಂಬಿನ ಪೀಠ ನನಗೆ ಅಂಟಿದೆಯೆಂದು
ಒಣನೆಪವು ಎಳೆಯಿತದು ಬಿಡು ಭರದಲಿ

ಪಂಚಬಾಣನ ಮಿತ್ರ ಯುದ್ಧಸಾರುವ ಹೊತ್ತು
ಪೂರ್ಣ ಚಂದಿರನೊಳಗೆ ಕೋಲಾಹಲ
ಪಚ್ಚೆಪಸರಿದ ಬಯಲು ಎದೆಗೆ ಬಾಣವನಿತ್ತು
ಪ್ರಾಣ ಬೇಡಲು ನೆನಪು ದಾವಾನಲ

ರಾಜಕಾರಣ ಬೇಡ ರಾಜ್ಯಭಾರವು ಬೇಡ
ರಾಧೆ, ನಿನ್ನಯ ಪ್ರೇಮವೊಂದು ಸಿಗಲಿ
ರಾಶಿ ಹೊನ್ನೂ ಬೇಡ ರಾಯತನವೂ ಬೇಡ
ರಾಧೆ, ಯಮುನೆಯ ತಟವು ನಮಗೆ ಇರಲಿ
*ಸುಪ್ತದೀಪ್ತಿ
೧೬-ಎಪ್ರಿಲ್-೨೦೦೯
************

ಪುನರಪಿ...

ಟೊಳ್ಳಿನೊಳಗೆ ಸದ್ದುಮಾಡದೆ ಬಿತ್ತು ಘನ
ಎಚ್ಚರಾಯಿತು ಮನ
ಸುದ್ದಿಗೆ ರೂಪ ತಾಳುತ್ತಾ
ತಾಳುತ್ತಾ ಸಾಗುತ್ತಾ
ತಲೆ ಕಣ್ಣು ಕಿವಿ ಬಾಯಿ ಮೂಗು
ಕೈಕಾಲು ಅಂಗಾಂಗ
ಮೂಡಿ ಮುಗ್ಧ ಲಿಂಗಾಂಗ
ಪೂರ್ಣಗೊಂಡದ್ದು ಜಾರಿ ಬಂದಾಗ
ಸದ್ದೇ ಸುದ್ದಿ, ಕಂಡದ್ದೆಲ್ಲ ಮದ್ದು
ಗದ್ದಲವೂ ಮುದ್ದು

ಹೊಸರೂಪಕ್ಕೆ ಹಳೆಯದರ ನೆನಹಿಲ್ಲ
ರೇಖೆ ವಿನ್ಯಾಸಗಳ ಹೊಳಹು
ಹಾಗಂತೆ-ಹೀಗಂತೆ-ಅಂತೆ-ಕಂತೆ
ಬೊಂತೆಯೊಳಗೆ ಹೊಸದೇ ಚಿಂತೆ

*ಸುಪ್ತದೀಪ್ತಿ
೧೩-ಅಕ್ಟೋಬರ್-೨೦೧೦
************

No comments:

Post a Comment