‘ಬಹುಮುಖಿ ಭಾರತ’ ಚಿಂತನ ಮಂಥನ
ಮೋದಿ ಸರಕಾರ ಭ್ರಮೆಗಳನ್ನು ಬಿತ್ತುತ್ತಿದೆ : ಗೌರಿ ಲಂಕೇಶ್
ಮೋದಿ ಸರಕಾರ ಭ್ರಮೆಗಳನ್ನು ಬಿತ್ತುತ್ತಿದೆ : ಗೌರಿ ಲಂಕೇಶ್
ಮೋದಿ ಸರಕಾರ ಭ್ರಮೆಗಳನ್ನು ಬಿತ್ತುತ್ತಿದೆ. ಅದನ್ನೆ ಸತ್ಯ ಎಂಬುದಾಗಿ ಬಿಂಬಿಸಲಾಗುತ್ತಿದೆ. ಆದರೆ ಅದು ಸತ್ಯ ಅಲ್ಲ, ಕೇವಲ ಭ್ರಮೆ ಆಗಿದೆ ಎಂದು ‘ಗೌರಿ ಲಂಕೇಶ್’ ಪತ್ರಿಕೆಯ ಸಂಪಾದಕಿ ಗೌರಿ ಲಂಕೇಶ್ ಟೀಕಿಸಿದ್ದಾರೆ.
ಉಡುಪಿ ರಥಬೀದಿ ಗೆಳೆಯರು ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ರವಿವಾರ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾದ ‘ಬಹುಮುಖಿ ಭಾರತ’ ವೈಚಾರಿಕ ಸಾಹಿತ್ಯ- ಚಿಂತನ- ಮಂಥನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಬಹುಮುಖಿ ಭಾರತವನ್ನು ವಿರೋಧಿಸುವವರು ಕೇವಲ ಬಹುಮುಖಿಯನ್ನು ಮಾತ್ರವಲ್ಲ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕೂಡ ವಿರೋಧಿಸುತ್ತಿದ್ದಾರೆ. ಇವರಲ್ಲಿ ಕಾಲ್ಪನಿಕ ರಾಷ್ಟ್ರೀಯತೆ ಹುಟ್ಟುತ್ತದೆಯೇ ಹೊರತು ನಿಜವಾದ ರಾಷ್ಟ್ರೀಯತೆಯಲ್ಲ. ಗೋರಕ್ಷಕರ ದಾಳಿಗೆ ಬಲಿಯಾದ ಪ್ರವೀಣ್ ಪೂಜಾರಿಯ ವಿಚಾರದ ಬಗ್ಗೆ ಧ್ವನಿ ಎತ್ತದವರು, ಮಡಿಕೇರಿಯಲ್ಲಿ ಟಿಪ್ಪು ಜಯಂತಿ ವೇಳೆ ಕಾಲು ಜಾರಿ ಬಿದ್ದು ಮೃತಪಟ್ಟ ವ್ಯಕ್ತಿಗಾಗಿ ದೊಡ್ಡ ಗಲಾಟೆ ಮಾಡುತ್ತಾರೆ ಎಂದು ಅವರು ಆರೋಪಿಸಿದರು.
ಭಾರತದ ಬಹುಮುಖಿ ಸಂಸ್ಕೃತಿಯು ದೊಡ್ಡ ಅಪಾಯದಲ್ಲಿದೆ. ಅಧಿಕಾರದಲ್ಲಿ ಇರುವವರಿಗೆ ಇಲ್ಲಿನ ಬಹುಮುಖಿ ಸಂಸ್ಕೃತಿ, ಭಾಷೆ, ಧರ್ಮಬೇಕಾಗಿಲ್ಲ. ಪ್ರಜಾಪ್ರಭುತ್ವ ಹಾಗೂ ಬಹುಮುಖಿ ಭಾರತವನ್ನು ಕಾಪಾಡಬೇಕಾದರೆ ಸಹಸ್ರಾರು ವರ್ಷಗಳಿಂದ ನಮ್ಮ ಜೀವನದ ಭಾಗವಾಗಿ ರುವ ಬಹುಮುಖಿ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ವೈದೇಹಿ ಮಾತನಾಡಿ, ಬಹುಮುಖಿ ಭಾರತವು ಇಲ್ಲಿನ ಭಾಷೆ ಹಾಗೂ ಹೆಣ್ಣು ಸತ್ವದಡಿ ನಿಂತಿದೆ. ಅದು ಇಲ್ಲದಿದ್ದರೆ ಇಡೀ ದೇಶ ಹಾಳಾಗುತ್ತದೆ. ಇಲ್ಲಿ ಭಾವನೆಗಳಿಗೆ ಬೆಲೆ ಇಲ್ಲದೆ ಸಂಬಂಧ ಗಳೇ ಇಲ್ಲವಾಗಿದೆ. ಜನ ಬಹುಮುಖಿಯಿಂದ ಏಕಮುಖಿಯತ್ತ ಸಾಗುತ್ತಿದ್ದಾರೆ ಎಂದು ವಿಷಾಧ ವ್ಯಕ್ತಪಡಿಸಿದರು.
ಹಿಂದು ಮುಸ್ಲಿಮ್ ನಡುವಿನ ಸಣ್ಣ ವಿವಾದವನ್ನೂ ದೊಡ್ಡದಾಗಿ ಪ್ರಕಟಿಸುವ ಮೂಲಕ ಸಮಾಜದಲ್ಲಿ ಬೆಂಕಿ ಹಾಕುವ ಕಾರ್ಯವನ್ನು ಮಾಧ್ಯಮಗಳು ಮಾಡುತ್ತಿವೆ. ಇದರಿಂದ ಇಂದು ಸಮಾಜದಲ್ಲಿ ಅಶಾಂತಿ ಸೃಷ್ಠಿಯಾಗುತ್ತಿದೆ. ಮಾಧ್ಯಮಗಳಿಗೆ ದೇಶ ಕಟ್ಟುವ ಆಲೋಚನೆಯೇ ಇಲ್ಲವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಯಾಗಿ ಅಕಾಡೆಮಿ ಸದಸ್ಯ ಮೇಟಿ ಮುದಿಯಪ್ಪ ಮಾತನಾಡಿದರು.
ರಥಬೀದಿ ಗೆಳೆಯರು ಸಂಘಟನೆಯ ಅಧ್ಯಕ್ಷ ಮುರಳೀಧರ್ ಉಪಾಧ್ಯ ಸ್ವಾಗತಿಸಿದರು. ಹಿರಿಯ ಚಿಂತಕ ಪ್ರೊ.ಫಣಿರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಸುಬ್ರಹ್ಮಣ್ಯ ಜೋಶಿ ಉಪಸ್ಥಿತರಿದ್ದರು. ಸಂತೋಷ್ ಕುಮಾರ್ ಹಿರಿಯಡ್ಕ ಕಾರ್ಯಕ್ರಮ ನಿರೂಪಿಸಿದರು.
ಕೃಪೆ : ವಾರ್ತಭಾರತಿ
No comments:
Post a Comment