Monday, November 29, 2010

A.K. Ramanujan - Two poems

ಎರಡು ಮೊಟ್ಟೆ

ಚಿಕ್ಕಂದಿನಿಂದ
ನನಗೆ
ಬಿಸಿಲಿನ ಚಿಟ್ಟೆ
ಬೆಲ್ಲದ ನೊಣ
ಸಕ್ಕರೆ ಇರುವೆ
ಬಹಳ ಇಷ್ಟ

ಹಿಡಿದು ನಾಜೋಕಾಗಿ ರೆಕ್ಕೆ
ಬಿಡಿಸಿ
ಕಾಲಿನ ಕೋನ ಅಗಲಿಸಿ
ಅವು ಅಂಗಾತ ಮಲಗಿ
ಕೈಕಾಲು ಒದೆಯುತ್ತ
ನನ್ನ ಮನಸ್ಸು ಕೊಟ್ಟ
ತಲೆ ಕೆಳಗು ಸೈಕಲ್
ಹೊಡೆದಾಗ

ಚಿಟ್ಟೆಗಳ ರೆಕ್ಕೆಬಣ್ಣದ ಹಳದಿ
ಬೆರಳಿಗೆ ಸವರಿ

ನಾನು ಬಯಾಲಜಿ
ಮೇಷ್ಟರಾದೆ

 ಮೂರು ವಯಸ್ಸಿನಿಂದ ಆಕಾಶ
ನೋಡಿ ಮೈಸೂರು ಕಿಟಿಕಿ
ಯಲ್ಲಿ ಏರೋಪ್ಲೇನ್ ಕನಸು
ಕಂಡು

ತಮ್ಮ
ಪೈಲಟ್ಟಾಗಿ ವಿಧಿ
ಯಿಲ್ಲದೆ ಯುದ್ಧ
ಕ್ಕೆ ಹೋದಾ


ಅವನಿಗೆ ನಡುಮಧ್ಯ
ನನ್ನ ನೆನಪು
ಬಂತು

ಕೆಳಗೆ
ಗಟ್ಟಿನೆಲದ ಮೈಸೂರಿನಲ್ಲಿ
ಪೇಪರೋದುತ್ತ ನಾನು
ದಿನ ತಪ್ಪದೆ ಬೆಳಿಗ್ಗೆ ತಿಂದ
ಎರಡು ಕೋಳಿಮೊಟ್ಟೆ ನೆನಪು

ಬಂದು
ಆ ಕೋಪಕ್ಕೆ ಅವನು
ಇನ್ನೆರಡು ಬಾಂಬು
ಹಾಕಿ

ಅಮೃತಸರ
ದ ಒಂದು ಇಡೀ ಮೊಹಲ್ಲ

ನೆಲಸಮ
ವಾಯಿತು.
^^^^^^

ಒಂದು ಕೊಡೆ, ಒಂದು ವಾಚು

ನಮ್ಮಪ್ಪ ನನಗೆ
ಚಿಕ್ಕಂದಿನಲ್ಲೇ ಸಣ್ಣ
ಒಂದು ಕೊಡೆ ಒಂದು ವಾಚು
ತಂದುಕೊಟ್ಟರು.

ಅವರು ಆರಡಿ,
ಅವರ ಮೇಲೆ ಎರಡುಮೂರಡಿ
ಅವರ ಕೊಡೆ,
ಹೀಗಾಗಿ ನಾನು, ಮೂರಡಿ
ಕುಳ್ಳ,
ಪಕ್ಕದಲ್ಲಿ ಮಳೆಯಲ್ಲಿ ನಡೆದಾಗ
ಮೈ ಎಲ್ಲ ಎರಚಲು,
                           ಹೋಗುವಾಗ
ಎಡಗಡೆ ಒದ್ದೆ, ಬರುವಾಗ ಬಲಗಡೆ
ಒದ್ದೆ.
                          ಅವರ ಗಿರಿಗಾಂ ಚಪ್ಪಲಿ
ಹೆಜ್ಜೆಹೆಜ್ಜೆಗೂ ಹಾರಿಸಿದ ಕೆಸರಿನ ತುಂತುರು
ಕಾಲಿನಿಂದ ತಲೆವರೆಗೆ,
                           ಕೊಡೆಕಡ್ಡಿಗಳಿಂದ
ಮಳೆ ನಿಂತ ಮೇಲೂ ತೊಟ್ಟುತೊಟ್ಟಾಗಿ ಮಳೆ
ನನ್ನ ತಲೆ ಮೇಲೆ.

ಅಯ್ಯೋ ಪಾಪ ಎಂದು ಅಪ್ಪ ಕುಳ್ಳನ ಹಾಗೆ
ಬಗ್ಗಿ ನಡೆದು ಕೊಡೆ ಇಳಿಸಿದಾಗ
ನನಗೆ ಬಹಳ ನಗು ಬರುತ್ತಿತ್ತು.

ಆದರೆ
         ಕೊಡೆ ಇಳಿಸಿದರೆ
ನನ್ನ ಕಣ್ಣು ಮೂಗು ಕತ್ತಿಗೆ
ಕುತ್ತು; ಕೊಡೆ ತುದಿ ಕೊಕ್ಕೊಕ್ಕೆಂದು
ಕುಕ್ಕುತ್ತಿತ್ತು.

ನಮ್ಮ ತಂದೆ ಛತ್ರಿ ಅಡಿಯಲ್ಲಿ
ನಡೆಯುವುದು ಬಹಳ ಕಷ್ಟ,
ಅವರು ಅದಕ್ಕೇ ಕೊಡೆ,
ಜತೆಗೆ ಇರಲಿ ಎಂದು ಹೊಸ ವಾಚು,
ತಂದು ಕೊಟ್ಟರು.

ಹೊಸ ಕೊಡೆ ಬಂದ ಮೇಲೆ
ಮಳೆಯಡಿಯಲ್ಲಿ ಅವರ ಕೊಡೆ,
ಅವರ ಕೊಡೆಯಡಿಯಲ್ಲಿ
ನನ್ನ ಕೊಡೆ.

ಆದರೆ
ಅಣ್ಣ ಕತ್ತಿವರಸೆ ಆಡಿ ನನ್ನ ಕೊಡೆಯ ಕೋಲು
ಮುರಿದ, ಒಂದು ಭಾನುವಾರದ ಬಿರುಗಾಳಿಯಲ್ಲಿ
ಅದರ ಕರಿ ಬಟ್ಟೆ ಕೂಡ
ತಿರುಗುಮುರುಗಾಯಿತು.

                   ವಾಚಂತೂ
ಒಂದು ವಾರ ನಡೆದು ನಿಂತುಹೋಯಿತು.
ಕೋಪಕ್ಕೆ ನಾನು
ಅಜ್ಜಿಯ ಎಲೆಡಿಕೆ ಕೊಟ್ಟಣದಲ್ಲಿಟ್ಟು
ಒಚಿದು ದಿನ ಕುಟ್ಟಿ ಹಾಕಿದೆ.
                  ಅಮ್ಮ
ನನ್ನ ಬೈದು ಹೊಡೆದು
ಅದರ ಮುಖ
ಚಕ್ರ ಸ್ಪ್ರಿಂಗು ಕೈಕಾಲೆಲ್ಲ ಗುಡಿಸಿಹಾಕಿದರು.

ಬಹಳ ದಿನ
ಪಾಪ ನಮ್ಮ ಎರಡು ಹಲ್ಲಿನ ಬಚ್ಚುಬಾಯಜ್ಜಿ
ಎಲೆಡಿಕೆ ಪುಳ್ಳಂಗಾಯುಂಡೆ ಜಜ್ಜಿ
ತಿನ್ನುವಾಗೆಲ್ಲ
                  ಯಾಕೋ ರಾಮು ಗಡಿಯಾರದ
ಚಕ್ರವೋ ಹಲ್ಲೊ ಅರೆದಿಟ್ಟ ಹಾಗಿದೆ
ಅನ್ನುತ್ತಿದ್ದರು.
^^^^^^

No comments:

Post a Comment