ಮನುಷ್ಯತ್ವ ಆಳವನ್ನು ಕೆದಕಿದ "ಮಿಸ್ಟೇಕ್" ನಾಟಕ: ರಂಗವ್ಯಾಕರಣಕ್ಕೆ ಬಣ್ಣದ ಹೊಸ ವ್ಯಾಖ್ಯಾನ
ಜಿ.ಪಿ. ಪ್ರಭಾಕರ
ಉರ್ದು ಸಾಹಿತ್ಯದ ಖ್ಯಾತ ಕತೆಗಾರ ಸಾದತ್ ಹಸನ್ ಮಾಂಟೋನ ನಾಲ್ಕು ಕಥೆಗಳನ್ನು ಹೆಣೆದು ನಾಟಕರೂಪದಲ್ಲಿ ಅಭಿನಯಿಸಿ ಹೊಸ ಆಶಯ ಕಟ್ಟುವ ಪ್ರಯತ್ನ ಇತ್ತೀಚಿಗೆ ಎಂ.ಜಿ.ಎಂ. ಕಾಲೇಜಿನಲ್ಲಿ ನಡೆಯಿತು. "ಮಿಸ್ಟೇಕ್" ಎಂಬ ಹೆಸರಿನಲ್ಲಿ ರೂಪತಳೆದ ಈ ನಾಟಕ ಉಡುಪಿ ರಥಬೀದಿ ಗೆಳೆಯರ ಸಂಘಟನೆಯ ಆಶ್ರಯದಲ್ಲಿ ಜರುಗಿತು. ಖ್ಯಾತ ಯುವನಿರ್ದೇಶಕ ಡಾ| ಶ್ರೀಪಾದ ಭಟ್ ನಿರ್ದೇಶಿಸಿದ ಈ ನಾಟಕ ಪ್ರಸ್ತುತ ದೇಶದ ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಕೋಮುವಾದದ ಹಿನ್ನೆಲೆಯಲ್ಲಿ ಭಾರೀ ಸಮಕಾಲೀನವೆನಿಸಿತು.
ಮಾಂಟೋ 1947ರ ಭಾರತ ಪಾಕಿಸ್ತಾನ ವಿಭಜನೆಯ ಕರಾಳ ನೋವುಂಡವರು. ಅವರ ಎಲ್ಲಾ ಕಥೆಗಳಲ್ಲೂ ದೇಶ ವಿಭಜನೆಯ ದುರಂತದ ಎಳೆಗಳು ಮಾನವೀಯ ನೆಲೆಯಲ್ಲಿ ವಿಶಿಷ್ಟ ರೂಪಕ ಶಕ್ತಿಯನ್ನು ಪಡೆದಿವೆ. ಹಿಂಸೆ ಮತ್ತೆ ಮತ್ತೆ ಮಾಂಟೋನನ್ನು ಕಾಡುತ್ತದೆ. ಆದ್ದರಿಂದಲೇ ಮಾಂಟೋ ಹಿಂಸೆಯನ್ನು ಮನುಷ್ಯ ಪ್ರಜ್ಞೆಯ ಒಳಗಡೆಯೇ ಶೋಧಿಸುತ್ತಾನೆ. ಮನುಷ್ಯನ ಆಳದಲ್ಲಿ ಹುದುಗಿರುವ ಹಿಂಸಾರತಿ, ಕ್ರೌರ್ಯ ಎಲ್ಲವೂ ಇಲ್ಲಿ ಮಾಂಟೋನ ಭಾಷೆಯಲ್ಲಿ ಹೊಸರೂಪ ಪಡೆಯುತ್ತದೆ. ನಾಟಕದ ಹೆಸರೇ ಸೂಚಿಸುವಂತೆ ಮಿಸ್ಟೇಕ್ ಇಲ್ಲಿ ಮತ್ತೆ ಮತ್ತೆ ಎಲ್ಲಾ ನೆಲೆಗಳಲ್ಲೂ ವಿಸ್ತಾರಗೊಳ್ಳುವ ಒಂದು ರೂಪಕ. ವಿಭಜನೆಯ ಒಂದೊಂದು ತಪ್ಪುಗಳು ಇನ್ನೊಂದು ತಪ್ಪಿಗೆ ಮುನ್ನುಡಿಯಾಗುವ ರೀತಿ ಇಲ್ಲಿ ದೇಹಭಾಷೆಯ ಮೂಲಕ ಸಮರ್ಥವಾಗಿ ಮೂರ್ತರೂಪ ಪಡೆದಿದೆ. ಇಲ್ಲೆಲ್ಲಾ ನಿರ್ದೇಶಕರ ಪ್ರತಿಭೆ ಅಸಾಧಾರಣ್ವಾಗಿ ಮೆರೆದಿದೆ ಎನ್ನಬಹುದು. ದೇಶ ವಿಭಜನೆಯ ದುರಂತ ಕಥೆಯಲ್ಲಿ ಕಳೆದುಹೋದ ನೋವಿನ ಧ್ವನಿಗಳನ್ನು ಕೇಳಿಸುವ, ಅದಕ್ಕೆ ರಂಗರೂಪ ಕೊಡುವ ನಿರ್ದೇಶಕರ ಪ್ರಯತ್ನ ಯಶಸ್ವಿಯಾಗಿದೆ. ಹಿಂಸೆಯನ್ನು ಆಳವಾಗಿ ಅನುಭವಿಸುತ್ತಾ ಮೌನದಲ್ಲಿ ಧ್ಯಾನಿಸುವಂತೆ ಮಾಡುವ ಇಡೀ ನಾಟಕದಲ್ಲಿ ಬಣ್ಣಗಳ ಬಳಕೆ ಅಸಾಧಾರಣವಾಗಿ ಮೂಡಿಬಂದಿದೆ.
ರಂಗಕ್ರಿಯೆ ಎನ್ನುವುದು ದೇಹದಿಂದಲೇ ಹುಟ್ಟುವ ವಿಶಿಷ್ಟ ಭಾಷೆ. ರಂಗಭೂಮಿಯಲ್ಲಿ ತಾಂತ್ರಿಕತೆ ಅತ್ಯಾಧುನಿಕತೆ ಹೆಚ್ಚು ಬಳಕೆಯಾದಾಗ ಮೂಲ ರಂಗಕ್ರಿಯೆಯನ್ನು ಸೃಜಿಸುವ ದೇಹವೇ ಅಲಕ್ಷಿತವಾಗುತ್ತದೆ. ಆದ್ದರಿಂದ ಇಡೀ ಪ್ರಯೋಗದುದ್ದಕ್ಕೂ ನಿರ್ದೇಶಕರು ದೇಹ ಭಾಷೆಯನ್ನು ಬೇರೆ ಬೇರೆ ಲಯಗಳಲ್ಲಿ ಬಳಸುವ ಪ್ರಯತ್ನ ಮಾಡಿದ್ದಾರೆ. ಪ್ರಬುದ್ಧ ರಂಗವ್ಯಾಕರಣವನ್ನು ಬಿಂಬಿಸಹೊರಟಂತೆ ಕಾಣುವ ನಿರ್ದೇಶಕರ ಕನಸುಗಳಿಗೆ ಜೀವ ತುಂಬುವುದು ಮೋಹನ್ ಸೋನಾ ಅವರ ಅದ್ಭುತ ವರ್ಣ ವಿನ್ಯಾಸ, ವಸ್ತ್ರ ವಿನ್ಯಾಸ.
ಸೋನಾ ಅವರೇ ಹೇಳುವಂತೆ ಕಾಡುವ ಅನಿಷ್ಟಗಳು ಕೆನ್ನೇರಳೆಯಾಗಿ, ಹಳದಿ ಗೊಂದಲವಾಗಿಯೂ, ಕಂದು ಬಣ್ಣ ಧ್ಯಾನದ ನೀರವ ಮೌನವನ್ನು ರಂಗಕ್ಕೆ ಹರಡುತ್ತದೆ. ಹಸಿರು ಅದಮ್ಯ ಬಯಕೆಯಾಗಿ, ಕೆಂಪು ಮಣ್ಣು ಮತ್ತು ಹಸಿರು ಗೊಬ್ಬರ ನೆಲದ ಚೈತನ್ಯದ ಸಂಕೇತವಾಗಿ ಮೂಡಿಬಂದಿರುವುದು ಇಡೀ ನಾಟಕಕ್ಕೆ ಸಂಕೇತಗಳ ಹೊಸ ಗಾಂಭೀರ್ಯ ತಂದುಕೊಡುತ್ತದೆ. ಹೀಗೆ ಬಣ್ಣದ ಆಟ ಉದ್ದಕ್ಕೂ ನಡೆಯುವುದು ಅವರ್ಣನೀಯ ಕಾವ್ಯಶಕ್ತಿಯನ್ನು ತಂದಿದೆ. ಪ್ರೀತಿಯನ್ನು ಒಡಲಲ್ಲಿಟ್ಟುಕೊಂಡು ಹಿಂಸೆಯ ವಿಕಾರವನ್ನು ಹೊರಹಾಕುವ ಮಾನವೀಯ ತುಡಿತವನ್ನು ಪ್ರಯೋಗ ಒಳಗೊಳ್ಳುತ್ತದೆ. ಇಡೀ ನಾಟಕದುದ್ದಕ್ಕೂ ಇದು ಸ್ಥಾಯಿಯಾಗಿ ಹರಿಯುತ್ತದೆ
ತನ್ನ ಕುಟುಂಬದ ಮೇಲಿನ ಅತ್ಯಾಚಾರಕ್ಕೆ ಪ್ರತಿಯಾಗಿ ಖಾಸಿಂ ನಡೆಸುವ ಅತ್ಯಾಚಾರ ದೃಶ್ಯವಂತೂ ಸಂತೋಷ್‌ಕುಮಾರ್ ಪಟ್ಲರವರ ಅಭಿನಯದಲ್ಲಿ ಧ್ವನಿಪೂರ್ಣವಾಗಿ ವ್ಯಕ್ತವಾಯಿತು. ಬಟ್ಟೆಯನ್ನು ಹರಿದೆಸೆಯುತ್ತಾ ವಿಲಕ್ಷಣವಾಗಿ ವರ್ತಿಸಿದ ರೀತಿಯಂತೂ ಹಿಂಸೆಯ ಆಳದಲ್ಲಿ ಮನುಷ್ಯನ ಸ್ಥಿತಿ ಬಗ್ಗೆ ಮಮ್ಮಲ ಮರಗುವಂತೆ ಮಾಡುತ್ತದೆ. ಸಕೀನಾಳ ತಂದೆ (ದಿವಾಕರ ಕಟೀಲು) ಮಗಳ ಬಟ್ಟೆ ಹಿಡಿದುಕೊಂಡು ಆಕ್ರಂದಿಸುವ ದೃಶ್ಯಾಭಿನಯ ಹಾಗೆ ಸೈನಿಕರಲ್ಲಿ ಮಗಳನ್ನು ಹುಡುಕಿಕೊಡಿ ಎಂದು ಗೋಗರೆವುದು ಪ್ರೇಕ್ಷಕರಲ್ಲಿ ಕಣ್ಣೀರು ತರಿಸಿತು. ಇಲ್ಲಿ ಸೈನಿಕರು ಬಳಸಿದ ದೊಣ್ಣೆಗಳು, ತಲೆಗೆ ಕಟ್ಟಿದ ಕೇಸರಿ ಬಟ್ಟೆಗಳು ಹಿಂದೂ ಸಂಘಟನೆಗಳ ಉಗ್ರತೆಯ ರೂಪಕವಾಗಿಯೂ ಕಂಡಿತು. ಸಕೀನಾಳ ಶರೀರವನ್ನು ಹೊತ್ತೊಯ್ಯುವಾಗ ಏಸು ಶಿಲುಬೆ ಹೊತ್ತಂತೆ ತೋರಿಸುವುದರಲ್ಲೂ ಮನುಷ್ಯತ್ವದ ಲೇವಡಿ ಹೊಸ ಆಯಾಮ ಪಡೆಯುತ್ತದೆ.
ರಂಗದ ಸಮೂಹ ಕ್ರಿಯೆಯಲ್ಲಿ ನಟರು ಬಣ್ಣದ ಜೊತೆಗೆ ಬೆರೆತಾಗ ಹೊಸ ರಂಗಾನುಭವ ಉಂಟುಮಾಡಿತು ಎನ್ನಬಹುದು. ನಾಟಕದ ಕೊನೆಯ ಭಾಗದ ಕಥೆಯನ್ನು ಇಡೀ "ಮಿಸ್ಟೇಕ್" ನಾಟಕದ ಆಶಯದ ಕೇಂದ್ರವಾಗಿ ಬೆಳೆಸಿದಂತಿದೆ. ಇಡೀ ನಾಟಕವನ್ನೇ ಗೆಲ್ಲಿಸಿದ ದೃಶ್ಯಗಳು ಇಲ್ಲೇ ಇದ್ದವು.
(ಪ್ರಜಾವಾಣಿ - 2010)
ಸಂತೋಷ್ ನಾಯಕ್ ಪಟ್ಲಾ, ದಿವಾಕರ ಕಟೀಲು, ಸಂತೋಷ್ ಶೆಟ್ಟಿ ಹಿರಿಯಡ್ಕ, ಉದ್ಯಾವರ ನಾಗೇಶ್ ಕುಮಾರ್, ವಿನಯ ಸುವರ್ಣ ಕೆ, ಭಾಗ್ಯಲಕ್ಷ್ಮೀ ಅಭಿನಯ ವಿಶೇಷ ಗಮನ ಸೆಳೆಯಿತು. ಕಥಾವಸ್ತುವಿಗೆ ಆಪ್ತವಾಗಿ ಬಂದ ಡಾ. ಶಶಿಕಾಂತ ಕೆ. ಅವರ ಹಿನ್ನೆಲೆ ಸಂಗೀತ ನಾಟಕ ಪ್ಲಸ್ ಪಾಯಿಂಟ್. ಬೆಳಕಿನಲ್ಲಿ ರಾಜು ಮಣಿಪಾಲ ಭಾರೀ ಜಾಗ್ರತೆ, ಸೂಕ್ಷ್ಮತೆ ವಹಿಸಿದರೂ ಕೆಲೆವೆಡೆ ನಿಧಾನ ಗತಿಯಿಂದಾಗಿ ದುರ್ಬಲವಾಯಿತಾದರೂ ಕೆಲೆವೆಡೆ ಬೆಳಕಿನ ಸಂಯೋಜನೆ ಹೊಸ ಕಾವ್ಯಶಕ್ತಿ ಪಡೆದಿತ್ತು. ಮನುಷ್ಯತ್ವ ಆಳವನ್ನು ಕೆದಕಿದ "ಮಿಸ್ಟೇಕ್" ನಾಟಕ ರಂಗವ್ಯಾಕರಣಕ್ಕೆ ಬಣ್ಣದ ಹೊಸ ಆಯಾಮವನ್ನೇ ನೀಡಿತ್ತು.
(ಪ್ರಜಾವಾಣಿ - 2010)
No comments:
Post a Comment