Monday, January 24, 2011

Theatre presentation of Mistake


ಮಾಂಟೋನ ಕಥೆಗಳ ಕಥಾಭಿನಯ: ಮಿಸ್ಟೇಕ್
.ಕೆ. ಬೊಳುವಾರು

ಕಗ್ಗತ್ತಲ ಕಾಲದಲ್ಲಿ ಹಾಡುವುದು ಉಂಟೆ
ಹೌದು ಹಾಡುವುದು ಉಂಟು
ಕಗ್ಗತ್ತಲ ಕಾಲವನ್ನು ಕುರಿತು.........
ವಿಶ್ವಮಾನ್ಯ ನಾಟಕಕಾರ ಬರ್ಟೋಲ್ಟ್ ಬ್ರೆಕ್ಟ್ ಬರೆದ ಕವಿತೆಯೊಂದರ ಸಾಲುಗಳಿವು. ಯುದ್ಧ ಸಂದರ್ಭವನ್ನು ಕಗ್ಗತ್ತಲ ಕಾಲವೆಂದು ಆತ ಕರೆದು ಅದೆಷ್ಟೋ ವರುಷಗಳು ಉರುಳಿಹೋಗಿವೆ.

63 ವರ್ಷಗಳ ಹಿಂದೆ ನಡೆದ ದೇಶ ವಿಭಜನೆಯ ಕಾರಣವಾಗಿ ಕತೆಗಾರ ಸಾದತ್ ಹಸನ್ ಮಾಂಟೋ ಹಲವು ಕತೆಗಳನ್ನು ಬರೆಯುತ್ತಾರೆ. ಅವುಗಳಲ್ಲಿ ಮಿಸ್ಟೇಕ್, ಓಪನ್ ಮಾಡು, ಶರೀಫನ್ ಮತ್ತು ಪುರುಷಾರ್ಥ ಕತೆಗಳನ್ನು ಆಯ್ದುಕೊಂಡು ಉಡುಪಿ, ರಥಬೀದಿ ಗೆಳೆಯರು, ನಾಟಕ ಕಲಾವಿದರು ಮಿಸ್ಟೇಕ್ ಹೆಸರಿನ ರಂಗಪ್ರಯೋಗವೊಂದನ್ನು ಬಹು ಪರಿಣಾಮಕಾರಿಯಾಗಿ ಪ್ರಯೋಗಿಸಿದ್ದಾರೆ. (ನಿರ್ದೇಶನ: ಡಾ| ಶ್ರೀಪಾದ ಭಟ್, ಶಿರಸಿ).

ಗೊತ್ತಿದ್ದೂ ಮಾಡಿದ ತಪ್ಪನ್ನು ಗೊತ್ತಿಲ್ಲದೆ ಮಾಡಿದ ತಪ್ಪೆಂದು ತಪ್ಪನ್ನು ಮುಚ್ಚಿಹಾಕಿ ತಪ್ಪುಗಳ ಸರಮಾಲೆಯಲ್ಲಿ ಬೆಂದುಹೋದ ಸಾಮಾನ್ಯ ಜನರ ಬದುಕನ್ನು ಅಷ್ಟೇ ನಿಖರ ಸತ್ಯವಾಗಿ ಬಿಂಬಿಸಿದ ಮಾಂಟೋನ ಕಥೆಗಳನ್ನು ರಥಬೀದಿ ಗೆಳೆಯರು ಕಥಾಭಿನಯವಾಗಿ ಪ್ರಯೋಗಿಸಿದ್ದು ಉಡುಪಿ ಎಂ.ಜಿ.ಎಂ. ಕಾಲೇಜು ರವೀಂದ್ರ ಮಂಟಪದಲ್ಲಿ.

ಮಂಟಪವನ್ನು ಅಚ್ಚುಕಟ್ಟಾಗಿ ಕಪ್ಪು ಪರದೆಗಳಿಂದ ಅಲಂಕರಿಸಿ ಹಿನ್ನೆಲೆಯಲ್ಲಿ ಕಲಾವಿದ ಮೋಹನ್ ಸೋನಾ ಸೃಷ್ಟಿಸಿದ ವಿಶಿಷ್ಟ ಚಿತ್ರ ಕಲಾಕೃತಿಯನ್ನು ಇರಿಸಲಾಗಿತ್ತು. ವಿಭಜನೆಗೆ ಕಾರಣವಾದ ಎರಡು ಬಣ್ಣಗಳನ್ನು ಹೊರತುಪಡಿಸಿ ಜನಸಾಮಾನ್ಯರ ಬದುಕನ್ನು ಕಟ್ಟಿಕೊಡುವಂತೆ ಇತರ ಬಣ್ಣಗಳನ್ನು ಬಳಸಿ ಸಿದ್ಧಪಡಿಸಿದ ಪೈಂಟಿಂಗ್ , ಅದಕ್ಕೆ ಪೂರಕವಾದ ಬೆಳಕಿನ ವಿನ್ಯಾಸ ಮತ್ತು ನಿರ್ವಹಣೆ ಬಿಡಿ ಬಿಡಿ ಕಥೆಗಳಿಗೆ ಪ್ರತ್ಯೇಕ ಅರ್ಥವಂತಿಕೆಯನ್ನು ಒಟ್ಟು ನಾಟಕದಲ್ಲಿ ಹಲವು ಬಗೆಯ ಅರ್ಥಗಳನ್ನು ಹೊರಹೊಮ್ಮಿಸುವಲ್ಲಿ ಯಶಸ್ವಿಯಾಗಿದೆ. ಚಿತ್ರ ಕಲಾಕೃತಿಯೂ ಒಂದು ಪಾತ್ರವಾಗಿ ರಂಗಪ್ರಯೋಗದಲ್ಲಿ ವಿಜೃಂಭಿಸಿದೆ.

ಮೊದಲನೆಯ ಕಥಾ ನಿರೂಪಣೆಗೆ ಮಾತುಗಳ ಬಳಕೆಯಿಲ್ಲ. ಎರಡನೆಯ ಕಥೆಯಲ್ಲಿ ಚಲನೆ, ಶರೀರಭಾಷೆ, ಕೆಲವು ಸಾಲುಗಳನ್ನಷ್ಟೇ ಉಚ್ಚರಿಸುವುದು ಕತೆಯ ಕೊನೆಯಲ್ಲಿ ವಾಚ್ಯವಾಗಿಯೇ ಹೇಳಿ ಒಟ್ಟು ಪರಿಣಾಮವನ್ನು ಕಲಾತ್ಮಕಗೊಳಿಸಿದ ಬಗೆ ಅನನ್ಯ. ಮೂರನೆಯ ಕಥೆಯ ಎಲ್ಲ ಸಾಲುಗಳನ್ನು ನಿರೂಪಿಸುವ ಒಬ್ಬ ನಟ. ಅದನ್ನು ತಾದಾತ್ಮ್ಯದಿಂದ ಅಭಿನಯಿಸುತ್ತ ಜೀವಂತಗೊಳಿಸುವ ಇನ್ನೊಬ್ಬ ನಟ. ಈ ಇಬ್ಬರ ಜುಗಲ್‍ಬಂದಿಯಲ್ಲಿ ವಿಭಜನೆಯ ತಲ್ಲಣಗಳನ್ನು ಪರಿಣಾಮಕಾರಿಯಾಗಿ ಸಂವಹಿಸಲು ಸಂಗೀತದ ಸಹಕಾರ, ಎಲ್ಲವೂ ಸಮರ್ಥ ಸಂವಹನ.

ನಾಲ್ಕನೆಯ ಕಥೆ ನಾಟಕೀಯವಾಗಿ ಆರಂಭಗೊಂಡು ಮೂವರು ಸ್ನೇಹಿತರ ನಡುವಣ ಪ್ರೀತಿ, ಕೋಪ, ಸಂಕಟಗಳ ಮೂಲಕ ವಿಭಜನೆಯ ಕಾರಣವನ್ನು ವಿವರಿಸುತ್ತದೆ. ಕ್ರೌರ್ಯ, ಹಿಂಸೆ, ಅಧರ್ಮಗಳಿಗೆ ವಿಭಜನೆಯೇ ಮೂಲದ್ರವ್ಯವಾದಾಗ ಅದಕ್ಕಿಂತ ದೊಡ್ಡ ಅಮಾನವೀಯ ಕೃತ್ಯ ಇನ್ನೊಂದಿಲ್ಲ ಎಂಬುದನ್ನು ಪ್ರತೀ ಕ್ಷಣವೂ ಈ ನಾಟಕ ಹೇಳುತ್ತಲೇ ಸಾಗುತ್ತದೆ. ಹಾಗಾಗಿಯೇ ಮೊದಲೆರಡು ಕಥೆಗಳ ಪೀಠಿಕೆ ರಂಗವಿಸ್ತಾರಗೊಂಡು ನಾಲ್ಕನೆಯ ಕಥೆಯಲ್ಲಿ ಪರಾಕಾಷ್ಠೆ ಪರಿಣಾಮಕಾರೀ ನಾಟಕವಾಗಿ ಪ್ರದರ್ಶಿತಗೊಂಡಿದೆ. ರಂಗದಲ್ಲಿ ಪ್ರಯೋಗಿಸಲ್ಪಟ್ಟ ಈ ನಾಲ್ಕೂ ಕಥೆಗಳಲ್ಲಿಯೂ ಚಲನೆಯಿದೆ, ಹುಡುಕಾಟವಿದೆ, ಹಿಂಸೆಯಿದೆ, ಅದರೊಳಗೇ ಪ್ರೀತಿಯಿದೆ, ಕಾಳಜಿಯಿದೆ. ಇದಕ್ಕೆ ಪೂರಕವಾಗಿ ಪಾಬ್ಲೊ ನೆರೂದ, ಬ್ರೆಕ್ಟ್ ಶರೀಫ ಮತ್ತು ಸೂಫಿ ಹಾಡಿನ ಸಾಲುಗಳು ಬಳಕೆಯಾಗಿದೆ. ಧ್ವನಿಮುದ್ರಿತ ಮತ್ತು ಜೀವಂತ ಸ್ವರಸಂಗೀತ ನಾಟಕದ ಯಶಸ್ಸಿಗೆ ಕಾರಣವಾಗಿದೆ. (ಸಂಗೀತ ಡಾ| ಶಶಿಕಾಂತ)

ನಿರ್ದೇಶಕರು ಮತ್ತು ನಟ ನಟಿಯರ ರಂಗಭೂಮಿ ಕುರಿತ ಬದ್ಡತೆ, ಸಂಯಮದ ನಟನೆ, ಪೂರಕ ವೇಷಭೂಷಣ, ಪ್ರಸಾಧನ, ರಂಗಪರಿಕರ, ಬೆಳಕು ನಿರ್ವಹಣೆ ಇವೆಲ್ಲವನ್ನೂ ಕಲಾತ್ಮಕವಾಗಿ ನಿರ್ದೇಶಿಸಿದ ನಿರ್ದೇಶಕ ಇವರೆಲ್ಲರೂ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ನಾಟಕ ವೀಕ್ಷಿಸಿದ ಗೆಳೆಯರೊಬ್ಬರು ಗಂಭೀರವಾಗಿ ಪ್ರತಿಕ್ರಿಯೆ ನೀಡಿದ್ದು ಹೀಗೆ - "ಈ ನಾಟಕ ಉಡುಪಿಯಲ್ಲಿ ಮಾತ್ರವಲ್ಲ ಭಾರತ, ಪಾಕಿಸ್ಥಾನ ಹಾಗೂ ಬಾಂಗ್ಲಾದೇಶಗಳ ಎಲ್ಲ ಹಳ್ಳಿ ಪಟ್ಟಣಗಳಲ್ಲಿಯೂ ಪ್ರದರ್ಶನಗೊಳ್ಳಬೇಕಾಗಿದೆ. ಇವತ್ತಿನ ದಿನಗಳಲ್ಲಿ ಅಂತಹ ತುರ್ತಿದೆ".

ಇದು ರಥಬೀದಿ ಗೆಳೆಯರು ನಡೆಸಿದ ರಂಗ ಪ್ರಯತ್ನಕ್ಕೆ ಪ್ರಾಪ್ತಿಯಾದ ಶಹಭಾಸ್‍ಗಿರಿ ಎಂದೇ ಹೇಳಬೇಕಾಗಿದೆ.

 (ಉದಯವಾಣಿ 23-07-2010)




 

No comments:

Post a Comment