ಉಡುಪಿಯ ರಥಬೀದಿ ಗೆಳೆಯರು
ಡಿ. ಆರ್.ನಾಗರಾಜ್
ಪುಟ್ಟ ಊರಿನಲ್ಲಿದ್ದೂ ಇಡೀ ವಿಶ್ವಕ್ಕೆ ಅಧಿಕೃತವಾಗಿ ಸ್ಪಂದಿಸುವ ರೀತಿಗೆ ಕರ್ನಾಟಕದಲ್ಲಿ ಅತ್ಯುತ್ತಮ ಮಾದರಿ ಎಂದರೆ ರಥಬೀದಿ ಗೆಳೆಯರ ಒಬ್ಬೊಬ್ಬರ ಮುಖಗಳೂ ಎದುರಿಗೆ ಬರುತ್ತಿವೆ. ಸಾಮಾನ್ಯವಾಗಿ ಎಲ್ಲ್ರರೂ ಹಸನ್ಮುಖಿಗಳು, ಸಜ್ಜನರು. ಸಂಜೆಯಾದ ಮೇಲೆ ನಮ್ಮ ಗುಂಡು ಹಾಕುವ ಅಭ್ಯಾಸಕ್ಕೆ ಕೊಂಚ ಬೆಚ್ಚಿ, ಕೊಂಚ ನಾಚಿ, ಕೊಂಚ ಪುಲಕಗೊಂಡು ಕಂಪನಿ ಕೊಡುವ ಗೆಳೆಯರು ಇವರು. (ಅಥವಾ ಕೆಲವರು ಮಾತ್ರ ಕಂಪೆನಿ ಕೊಡುತ್ತಾರೆ). ಗೆಳೆಯರ ಬಹುರೂಪೀ ಚಟುವಟಿಕೆಗಳಿಗೆ ನಾನು ಬೆರಗಾಗಿದ್ದೇನೆ. ಅಷ್ಟಮಠದ ನಿಂತ ನೀರಿನ ವಾಸದಲ್ಲೂ ಹೊಸದಕ್ಕೆ ಹಾತೊರೆವ ಈ ಗುಂಪು ಉಡುಪಿಯನ್ನು ಕ್ರಿಯಾಶೀಲವಾಗಿಸಿದೆ. ಇವರು ಉಡುಪಿಯನ್ನು ತಮ್ಮ ಪ್ರಾಣರಸ ತುಂಬಿದ ಚಾಣದಿಂದ ಕೆತ್ತಿ ಕೆತ್ತಿ ಸದ್ಯಕ್ಕೆ ಸಹನೀಯವಾಗಿಸಿದವರು. ಹೀಗಾಗಿ, ರಥಬೀದಿಯಲ್ಲಿ ಗೆಳೆಯರ ಜತೆ ಓಡಾಡುತ್ತಿದ್ದರೆ ಒಣ ವೈಯ್ಯಾಕರಣಿಗಳು, ನಿಜವಾದ ಪಂಡಿತರು, ಮೋಹಕ ಪಾಷಂಡಿಗಳು, ರಮ್ಯ ಕವಿಗಳು, ಕ್ರಾಂತಿಕಾರೀ ವೇಷದ ಧೂರ್ತರು, ತೀಕ್ಷ್ಣ ಬುದ್ಧಿಯ ಧೀಮಂತರು - ಹೀಗೆ ಹತ್ತು ಹಲವು ಜನ ಎದುರಿಗೆ ಸಿಗುತ್ತಾರೆ.
ರಥಬೀದಿ ಗೆಳೆಯರಲ್ಲಿ ಬಹುಪಾಲು ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬಗಳಿಂದ ಬಂದವರು. ಮತ್ತು ಆ ಬಗ್ಗೆ ಹೆಮ್ಮೆ ಮತ್ತು ಪಾಪಪ್ರಜ್ಞೆಗಳ ನಡುವೆ ಈ ಗೆಳೆಯರು ತುಯ್ದಾಡುತ್ತಾರೆ. ಆಗಾಗ ಇಲ್ಲಿ ಬ್ರಾಹ್ಮಣೇತರ ಮುಖಗಳೂ ಶೋಭಿಸಿ ರಥ ಎಳೆವ ಕೈಗಳಲ್ಲಿ ಬೇರೆಯವೂ ಸೇರಿವೆ ಎಂಬ ಸಮಾಧಾನವೂ ಸಣ್ಣದಾಗಿ ಮೂಡುತ್ತದೆ.
ನನಗೆ ಪ್ರಾಚೀನ ಊರುಗಳ ಬಗ್ಗೆ ಮಹಾ ಮೋಹ. ಕಾಶಿ, ಉಜ್ಜಯಿನಿ, ಪಾಟಲೀಪುತ್ರಗಳಿಗೆ ಈಗಲೂ ತಮ್ಮದೇ ಆದ ಶೋಭೆಯಿದೆ. ಬ್ರಾಹ್ಮಣ-ಶ್ರಮಣ ಧರ್ಮಗಳ ಬೇರೆ ಬೇರೆ ಲಯಗಳು ಈಗಲೂ ಆ ನಗರಗಳಲ್ಲಿ ಎದ್ದುಕಾಣುತ್ತವೆ. ಕಾಶಿಯಲ್ಲಿ ಮೃತ್ಯು ಮತ್ತು ಮುಕ್ತಿಗಳೆರಡೂ ಒಟ್ಟಿಗೇ ಕಾಡುತ್ತವೆ. ಅರೆಬೆಂದ ಹೆಣಗಳು, ಜಿನುಗುವ ತಾಪಸರು, ಅರೆನಗ್ನ ಭೀಕರ ಮುನಿಗಳು, ಸಂಸ್ಕೃತವನ್ನು ಕುಣಿಸಿ ಮಣಿಸುವ ಪ್ರಕಾಂಡ ಪಂಡಿತರು ಕಾಶಿಯನ್ನು ವಿಕಟ ವಿಲಾಸದ ನಗರಿಯನ್ನಾಗಿ ಮಾಡಿದೆ. ಇಲ್ಲಿರುವ ದೋಮರ, ಸಾಬರ, ಬೆಸ್ತರ, ಗೋಸಾಯಿಗಳ, ಶೂದ್ರಾತಿಶೂದ್ರರ ನದಿಯ ಮೇಲೆ ಕಾಶಿ ಎಂಬ ತೆಪ್ಪ ತೇಲುತ್ತಿದೆ.
ಉಡುಪಿ ಆ ಬಗೆಯದಲ್ಲ. ಕಾಶಿ ಹಲಬಗೆಯ ಉನ್ಮತ್ತ ಒತ್ತಡಗಳಿಗೆ ಮಣಿದು ಮಹಾ ಸಂಘರ್ಷಗಳನ್ನು ಕಂಡು ಸಾವನ್ನೆ ಜೀವನವನ್ನಾಗಿ ಮಾಡಿಕೊಂಡಿರುವ ನಗರಿ. ಸಂಪ್ರದಾಯಸ್ಥ ಬ್ರಾಹ್ಮಣರು, ಪಾಷಂಡಿ ಪಂಥಗಳು ಸೆಣಸಿ ಸೆಣಸಿ ಕಾಶಿ ಎಂಥದೊ ಅರೆ ಮಂಪರಿನ ಸ್ಥಿತಿಯಲ್ಲಿ ಸದಾ ತೇಲುತ್ತದೆ. ಉಡುಪಿಗೆ ಆ ಸೌಭಾಗ್ಯವಿಲ್ಲ. ಉಡುಪಿಗೆ ಇರುವ ಸೊಗಸು ಬೇರೆ ರೀತಿಯದು.
ಅನೇಕ ಅರ್ಥಗಳಲ್ಲಿ ಉಡುಪಿಯನ್ನು ಕಟ್ಟಿದವರು ಮಧ್ವಾಚಾರ್ಯರು. ಅವರ ವ್ಯಕ್ತಿತ್ವದಂತೆಯೇ ಇಡೀ ಉಡುಪಿ ಇಂದಿಗೂ ಇದೆ. ದಾರ್ಶನಿಕನೊಬ್ಬ ಇಡೀ ಊರೇ ಆಗಿಬಿಟ್ಟು ಇಂದಿಗೂ ಬದುಕುತ್ತಿರುವ ಇನ್ನೊಂದು ದೊಡ್ಡ ಉದಾಹರಣೆ ಮತ್ತೆ ಎಲ್ಲಿದೆಯೋ ನೋಡಬೇಕು. ನಡ್ಯಂತಿಲ್ಲಾಯ ಮಧ್ಯಗೇಹವಾಗಿ ಬಿಟ್ಟ ಊರು ಇದು. ದಟ್ಟ ಸಾಂಪ್ರದಾಯಕತೆಗೆ ಸಾಧ್ಯವಾಗುವ ಮಂದ್ರಸ್ತರದ ಜೀವಂತಿಕೆಗೆ ಸಾಕ್ಷಿ ಇದು.
ಅಷ್ಟಮಠದಾವರಣಗಳು ತಮ್ಮ ರಥಬೀದಿಯಲ್ಲಿ ಹಿಂದೆ ವೈಚಾರಿಕ - ಸಾಂಕೇತಿಕ ಪ್ರತಿರೋಧವನ್ನು ಕಂಡಿಲ್ಲ ಎಂದಲ್ಲ. ಕಾಶಿಯಲ್ಲಿ ಆದಿಮ ಕಾಳಗಳ ರೀತಿಯಲ್ಲಿ ಸಂಘರ್ಷಗಳು ನಡೆದು ಈಗ ಮೆತ್ತಗಾಗಿ ಬ್ರಾಹ್ಮಣಧರ್ಮ ಗೆದ್ದಿದೆ. ಆದರೆ, ಉಡುಪಿಯಲ್ಲಿ ಅವು ಈ ಹಿಂದೆ - ಜೈನ, ಬೌದ್ಧ ತಾಂತ್ರಿಕ ಅದ್ವಮವಾದಗಳು - ಸಾಂಕೇತಿಕವಾಗಿ ತಮ್ಮ ವಾದ ಮಂಡಿಸಿ ವಾಪಸಾಗುತ್ತಿದ್ದವು. ಆದರೆ ಕೆಲ ಶತಮಾನ ಕಾಲ ಅದೂ ಸ್ಥಗಿತವಾಗಿತ್ತು. "ರಥಬೀದಿ....." ಮತ್ತೆ ಅದನ್ನು ಚಾಲೂ ಮಾಡಿದೆ. ಈ ದೃಷ್ಟಿಯಿಂದ ಉಡುಪಿಯ ಏಳುನೂರು ವರ್ಷಗಳ ಇತಿಹಾಸದಲ್ಲಿ ರಥಬೀದಿ ಗೆಳೆಯರು ಒಂದು ಹೊಸ್ ರೀತಿಯ ಧ್ವನಿ. ಸಂಪ್ರದಾಯಸ್ಥರು ನಾಟಕವನ್ನು ಸಂದೇಹಿಸುತ್ತಾರೆ. ಆದ್ದರಿಂದಲೇ, ಸಾಮಾಜಿಕ ಸಂಹಿತೆಯನ್ನು ಹೇಳುವ ಸ್ಮೃತಿಗಳಲ್ಲಿ ನಟರಿಗೆ ಯಾವಾಗಲೂ ಕೀಳುಜಾತಿಯ ಜತೆಗೆ ಸ್ಥಾನ, ನಾಟಕವಾಡುವ ಗೆಳೆಯರು ಹೀಗಾಗಿ ತಮ್ಮ ಕಲೆಯ ಮೂಲಕವೇ ಸಂಪ್ರದಾಯವನ್ನು ಸಣ್ಣಗೆ ಬೆಚ್ಚಿಸಿದ್ದಾರೆ. ಉಡುಪಿಯಲ್ಲಿ ನಟರು ಹಿಂದೆಯೂ ಇದ್ದರು. ಆದರೆ, ಈ ಬಗೆಯ ಅಸಾಂಪ್ರದಾಯಿಕ ನಾಟಕಗಳನ್ನು ಆಡಿದ ಇತಿಹಾಸವಿತ್ತೆ? ಬಲ್ಲವರು ಹೇಳಬೇಕು.
ರಥಬೀದಿ ಗೆಳೆಯರ ಮಾರ್ದವತೆ ಉಡುಪಿಯ ಮೂಲಶಕ್ತಿಯನ್ನು ಮತ್ತೆ ನೆನಪಿಗೆ ತರುತ್ತದೆ. ರಥಬೀದಿಯಲ್ಲಿ ಮಾರ್ಕ್ಸ್‌ವಾದ ತನ್ನ ಸ್ಫೋಟಕ ಗುಣ ಕಳೆದು ಮೃದು ಮಧುರ ಸೌಂದರ್ಯಾತ್ಮಕ ತತ್ತ್ವವೋ, ಸಾಹಿತ್ಯ ವಿಮರ್ಶೆಯೋ ಆಗುತ್ತದೆ. ಶೂದ್ರರ ಸಿಟ್ಟು ಸಾಂಸ್ಕೃತಿಕ ವೈವಿಧ್ಯತೆ ಆಗಿ ಇಲ್ಲಿ ಪರಿವರ್ತನೆಯಾಗುತ್ತದೆ.
ಅನಂತಮೂರ್ತಿಯವರು ಭಾರತೀಪುರದಲ್ಲಿ ಶೋಧಿಸಿದ್ದು ಇಂಥದೇ ಅನುಭವವನ್ನು ರಥಬೀದಿಯ ವಿಸ್ತೃತ ರೂಪವೇ ಭಾರತೀಪುರ. ಹೀಗಾಗಿ, ಅನಂತಮೂರ್ತಿ ರಥಬೀದಿ ಗೆಳೆಯರ ಗೌರವ ಸದಸ್ಯರಾದದ್ದು ಕಾವ್ಯಾತ್ಮಕ ನ್ಯಾಯವೇ ಸರಿ. ಅವಕಾಶ ಸಿಕ್ಕರೆ ನಾನೂ ಉಡುಪಿಯಲ್ಲಿ ಕೆಲಕಾಲ ನೆಲಸೇನು. ಆದರೆ, ರಥಬೀದಿಯಲ್ಲಿ ಅಲ್ಲ. ಉಡುಪಿಯ ಅಂಚಿನಲ್ಲಿದ್ದು ಮಧ್ಯಗೇಹಕ್ಕೆ ಆತ್ಮೀಯ ಶತ್ರುತ್ವದ ದಾಳಿ ಮಾಡಿಯೇನು.
ಹೀಗೆ ಉಡುಪಿ ಎಂಬ ದ್ವೀಪಕ್ಕೆ ಹೊರ ಜಗತ್ತಿನ ಜನ ಹೋಗಲು ಇರುವ ಏಕೈಕ ಲಾಂಚು ರಥಬೀದಿ ಗೆಳೆಯರು.
ಉಡುಪಿಯ ಸಾಂಸ್ಕೃತಿಕ ಕಥನ (೧೯೯೮)
- ನಿ. ಮುರಾರಿ ಬಲ್ಲಾಳ್
ರಥಬೀದಿ ಗೆಳೆಯರು (ರಿ)
ಉಡುಪಿ
No comments:
Post a Comment